ಬೆಲೀನ -
ಸಿಟೇಸಿಯ ಗಣದ ಬೆಲೀನಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ಸ್ತನಿ. ಡಾಲ್ಫಿನ್, ನಾರ್‍ವಾಲ್, ಪಾರ್ಪಾಯಿಸ್ ಮುಂತಾದ ತಿಮಿಂಗಿಲಗಳ ಸಮೀಪ ಸಂಬಂಧಿಯಾದ ಇದು ಒಂದು ಮುಖ್ಯ ಲಕ್ಷಣದಲ್ಲಿ ಅವುಗಳಿಂದ ಬೇರೆಯೆನಿಸಿದೆ. ಮೊದಲ ಮೂರು ಬಗೆಯ ತಿಮಿಗಳಲ್ಲಿ ಹಲ್ಲುಗಳಿವೆಯಾದರೆ ಬೆಲೀನದಲ್ಲಿ ಹಲ್ಲುಗಳ ಬದಲಿಗೆ ಬೃಹತ್ ಬಾಚಣಿಗೆಯಾಕಾರದ ತೆಳುತಟ್ಟೆಗಳಂತೆ ರೂಪುಗೊಂಡಿರುವ ಲೋಳೆಪೊರೆ (ಮ್ಯೂಕಸ್ ಮೆಂಬ್ರೇನ್) ಉಂಟು. ಹಲವಾರು ತಟ್ಟೆಗಳಿಂದ ರಚಿತವಾಗಿರುವ ಈ ಇಡೀ ರಚನೆಗೆ ಬೆಲೀನ್ ಅಥವಾ ತಿಮಿ ಮೂಳೆ (ಹ್ವೇಲ್ ಬೋನ್) ಎಂದು ಹೆಸರು. ಪ್ರತಿಯೊಂದು ಬೆಲೀನದಲ್ಲಿ ಸುಮಾರು 350 ತಟ್ಟೆಗಳಿದ್ದು ಇವು ಬಾಯಂಗಳದಿಂದ ಕೆಳಮುಖವಾಗಿ ಎರಡು ಸಾಲುಗಳಲ್ಲಿ ಒಂದರ ಹಿಂದೆ ಒಂದರಂತೆ ಜೋಡಣೆಗೊಂಡಿರುವುವು. ಒಂದೊಂದು ತಟ್ಟೆಯೂ ಸುಮಾರು 40 ಸೆಂಮಿ ಉದ್ದ ಇದೆ. ತಟ್ಟೆಗಳ ಹೊರ ಅಂಚುಗಳು ನುಣುಪಾಗಿವೆಯಾದರೆ ಒಳ ಅಂಚುಗಳು ಕುಂಚದ ತಂತುಗಳಂತೆ ಸೀಳಿಕೊಂಡಿವೆ. ಈ ತಟ್ಟೆಗಳು ಆಹಾರ ಸೋಸುವ ಜರಡಿಯಂತೆ ಕಾರ್ಯವೆಸಗುವುವು. ಜಲಚರಗಳಿಂದ ತುಂಬಿರುವ ಸಮುದ್ರದ ನೀರನ್ನು ಬೆಲೀನ ಸೇವಿಸಿದಾಗ, ಅದರಲ್ಲಿಯ ತೇಲುಜೀವಿಗಳು ಬೆಲೀನ್ ತಟ್ಟೆಯ ಪದರದಲ್ಲಿ ಸಿಕ್ಕಿಕೊಂಡು ಬರಿಯ ನೀರು ಹೊರಸುರಿಯುವುದು. ಆದ್ದರಿಂದ ಬೆಲೀನ್ ಜಲಶೋಧಕ ಯಂತ್ರ ಎನ್ನಬಹುದು. 

	ಬೆಲೀನಗಳಲ್ಲಿ ಬೆಲೀನಾಪ್ಟರ, ಮೆಗಾಪ್ಟರ, ಬೆಲೀನ, ಯೂಬೆಲೀನ ಮುಂತಾಗಿ ಅನೇಕ ಜಾತಿಗಳಿರುವುವು. ಇವು ಪ್ರಧಾನವಾಗಿ ಉತ್ತರಧ್ರುವ ಹಾಗೂ ದಕ್ಷಿಣ ಧ್ರುವ ಪ್ರದೇಶಗಳ ಕಡಲುಗಳಲ್ಲಿ ವಾಸಿಸುವುವು. ದೇಹ ಲಕ್ಷಣಗಳಲ್ಲಿ ಮತ್ತು ಜೀವನ ಕ್ರಮದಲ್ಲಿ ತಿಮಿಂಗಿಲಗಳನ್ನೆ ಹೋಲುವುವು.     						
(ಎಂ.ಎನ್.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ